Ka-naada

SECURE. EMPOWER. ENLIVEN

ನಾದ ಕೀಲಿಮಣೆ (ಕ-ನಾದTM) : ಕನ್ನಡ ಭಾಷೆ : ಲಿಪಿ ಮತ್ತು ಉಚ್ಚಾರಣೆ. Naada Keyboard (Ka-NaadaTM): Kannada Language: Script & Pronunciation -Prof. BVK Sastry

Posted by

– ಡಾ|| ಬಿ.ವಿ.ಕೆ.ಶಾಸ್ತ್ರಿ (Coinventor Naada Keyboard, Ka-NaadaTM)

ದೇಶ ನೋಡು  – ಕೋಶ ಓದು ಎಂಬುದು   ಜನಪ್ರಿಯ ಗಾದೆ. ಇದು ಎಲ್ಲರಿಗೂ ತಿಳಿದಿದೆ. ದೇಶಗಳ ವಿಷಯವನ್ನು ತಿಳಿಯಲು, ವ್ಯವಹರಿಸಲು ಭಾಷೆ ಅತಿ ಮುಖ್ಯವಾಗಿ  ಬೇಕಾಗುತ್ತದೆ. ಭಾಷೆಗೆ ಎರಡು ರೂಪಗಳಿವೆ.  ಉಚ್ಚಾರಣೆಯಲ್ಲಿ ಶಬ್ದ – ರೂಪ.  ಬರವಣಿಗೆಯಲ್ಲಿ ಲಿಪಿ -ಸಂಕೇತ  -ದೃಶ್ಯ ರೂಪ. ಶಬ್ದರೂಪಕ್ಕೆ ಉಚ್ಚಾರಿತ ವರ್ಣಮಾಲೆ,   ಲಿಪಿ ರೂಪಕ್ಕೆ ಬರವಣಿಗೆಯ ಸಂಕೇತಗಳು ಬಳಕೆಯಾಗುತ್ತದೆ.

ಭಾರತೀಯ ಭಾಷೆಗಳಲ್ಲಿ ’ ಬರೆದಂತೆ ಓದು, ನುಡಿದಂತೆ ಬರೆ’ ಎಂಬ ನಿಯಮಕ್ಕೆ ಅನುಗುಣವಾಗಿ ಪ್ರತಿಯೊಂದು ಉಚ್ಚಾರಿತ ವರ್ಣ / ವರ್ಣಸಮೂಹಕ್ಕೆ ಒಂದು ವಿಶಿಷ್ಟ ಲಿಪಿ ಸಂಕೇತವನ್ನು ನೀಡಲಾಗಿದೆ. ಇದರಿಂದ  ಬಹುತೇಕ ಭಾರತೀಯ ಭಾಷೆಗಳಲ್ಲಿ  ಇಂಗ್ಲೀಷ್ ಅಥವಾ ಇತರ ಐರೋಪ್ಯ ಪಾಶಿಮಾತ್ಯ ಭಾಷೆಗಳಲ್ಲಿ ಇರುವಂತಹ ’ ಸ್ಪೆಲ್ಲಿಂಗ್’ ಎನ್ನುವ ತಾಂತ್ರಿಕತೆ  ಬೇಕಾಗುವುದಿಲ್ಲ.

ಭಾಷೆಯ ಪ್ರಾಥಮಿಕ ಶಿಕ್ಷಣವು ಮಾತೃಭಾಷೆ / ಬಾಲ್ಯ -ಬೆಳವಣಿಗೆಯ ಪರಿಸರದಲ್ಲಿನ ಭಾಷೆಯಾಗಿ ರೂಪದಲ್ಲಿ ಜನ-ದೇಶ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುತ್ತದೆ. ಭಾಷೆಯ ವಿಕಸಿತ ಸ್ವರೂಪವು ನಾನಾ ಪ್ರಕಾರದ್ದಾಗಿರುತ್ತದೆ:  ಸಾಂಸ್ಕೃತಿಕ,  ಸಾಹಿತ್ಯಕ, ವ್ಯಾವಹಾರಿಕ, ಶಾಸ್ತ್ರೀಯ ಹಾಗೂ ಜಾನಪದ  ಭಾಷೆಗಳಲ್ಲಿ ಪದ ಸ್ವರೂಪಗಳು, ವ್ಯಾಕರಣ ನಿಯಮಗಳು, ತಮ್ಮದೇ ಆದ ವೈಷಿಷ್ಟ್ಯವನ್ನು ಹೊಂದಿರುತ್ತದೆ.  ಈ ರೀತಿಯಾಗಿ ಭಾಷೆಯ ನಾನಾಸ್ತರಗಳಲ್ಲಿ ಕಂಡುಬರುವ ಸಾಹಿತ್ಯ-ಪ್ರಯೋಗಗಳ ಪದಗಳನ್ನು ಕೋಶಗಳಲ್ಲಿ ದಾಖಲಿಸುತ್ತಾರೆ.  ಕೋಶವನ್ನು ಓದುವುದರಿಂದ ದೇಶವಿಶೇಷಗಳ ಸಂಸ್ಕೃತಿಯ ಪರಿಚಯ ಉಂಟಾಗುತ್ತದೆ. ಪ್ರಾಚೀನ ಸಾಹಿತ್ಯದ ಪದ-ಕೋಶಗಳನ್ನು ಓದುವುದರಿಂದ ಪ್ರಾಚೀನ ಸಂಸ್ಕೃತಿಯ , ಇತಿಹಾಸ -ಚರಿತ್ರೆಗಳ ಪರಿಚಯ ಉಂಟಾಗುತ್ತದೆ.

ಭಾಷೆಯು ದೇಶದ ಸಂಸ್ಕೃತಿಯ ಅವಿಭಾಜ್ಯ ಅಂಗ.  ಕನ್ನಡ ಪ್ರಹಸನ ಪಿತಾಮಹ ಟಿ. ಪಿ. ಕೈಲಾಸಂ ಹೇಳುತ್ತಾರೆ:  ಭಾಷೆ ಬಿಟ್ಟು ಭಾವ ನೋಡು ! ಎಂದರೆ ಭಾಷೆ ಸಾಹಿತ್ಯ ಪ್ರಯೋಗಗಳಲ್ಲಿ ಅಪರೂಪಕ್ಕೆ ಕೆಟ್ಟರೂ ಅದರ ಹಿಂದೆ ಇರುವ ಭಾವವನ್ನು ಗ್ರಹಿಸಬೇಕು. ಆದರೆ ಭಾವವೇ ಕೆಟ್ಟರೆ ?? ಖಂಡಿತವಾಗಿ  ಭಾಷೆ ಕೆಡುತ್ತದೆ !

ಭಾಷೆ ಕೆಟ್ಟರೆ ದೇಶ -ದೇಶ-ಸಂಸ್ಕೃತಿ -ಸಂಸ್ಕಾರ ಗಳು, ಅದಕ್ಕೆ ಸಂಬಂಧ ಪಟ್ಟ ಇತಿಹಾಸ, ಚರಿತ್ರೆ, ಆಚರಣೆ, ಅಭಿಮಾನಗಳೂ ಕೆಡುತ್ತವೆ. ಕೆಟ್ಟ ಭಾಷೆ   ಕೆಡುಕಿನ ಮೂಲವಾಗುತ್ತದೆ.

ಭಾಷೆಯ ಕೆಡವು  ನಾನಾ ಹಂತಗಳಲ್ಲಿ ಆಗುತ್ತದೆ. ಈ ಭಾಷಾ-ವಿಕೃತಿಯನ್ನು ತಡೆದು ಭಾಷೆಯ ಪ್ರಯೋಗವನ್ನು ಶಿಸ್ತಿನ ಚೌಕಟ್ಟಿನಲ್ಲಿ ಇರಿಸುವುದೇ  ವ್ಯಾಕರಣ, ಕೋಷ, ಸಾಹಿತ್ಯ, ಸಂಸ್ಕಾರಗಳು.  ಭಾಷೆಯನ್ನು ಬಳಸುವ ಜನಗಳು ಭಾಷೆಯ ರಕ್ಷಕರಾಗಿ ಇರುವ ತನಕ ಭಾಷೆ ಸಮಾಜದಲ್ಲಿ ಜೀವಂತವಾಗಿರುತ್ತದೆ. ಭಾಷೆಯ ವಿಕೃತಿಗಳು, ಭಾಷೆಯ ಸಂಕರಗಳು ಬಹಳ ನಿಧಾನವಾಗಿ, ಆದರೆ ಅತ್ಯಂತ ಖಚಿತವಾಗಿ  ಭಾಷಿಕ ಸವಕಳಿಯಿಂದ  ಭಾಷಿಕ ಸಮಾಜದ ಸಂಸ್ಕೃತಿಯನ್ನು ಪರಿವರನೆಗೋಳಿಸುತ್ತದೆ. ಸಂಸ್ಕೃತದಂತಹ ’ ವ್ಯಾಕರಣ ನಿಷ್ಠ – ನಿಷ್ಠುರ’  ಭಾಷೆಗಳು ತಮ್ಮ ನಿಯಮಬದ್ಧತೆಯನ್ನು ಉಳಿಸಿಕೊಳ್ಳುವುದನ್ನು ಪ್ರಧಾನವಾಗಿಟ್ಟುಕೊಂಡು ’ ಜನ-ಪ್ರಿಯ ವ್ಯವಹಾರದಿಂದ ಸ್ವಲ್ಪ ಸ್ವಲ್ಪವಾಗಿ ದೂರವಾಗುತ್ತಾ ಪಂಡಿತ ಭಾಷೆಯಾಗಿ ಮಡಿವಂತರ , ಮಠ-ಮಾನ್ಯ- ರಾಜಾಶ್ರಯ ಜೀವಿತ ದಲ್ಲಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತದೆ’.  ಹಾಗೂ ಇದೇ ಪ್ರಕ್ರಿಯೆಯಲ್ಲಿ ಪ್ರಾಕೃತ ಗಳು, ದೇಶಭಾಷೆಗಳು ಸಂಸ್ಕೃತೋಪಜನ್ಯ – ಸಂಸ್ಕೃತೋಪಜೀವ್ಯವಾಗಿ ಸಾಮಾಜಿಕ ವ್ಯವಹಾರಕ್ಕೆ ಬರುತ್ತವೆ.  ಕಾಲಾನುಕ್ರಮದಲ್ಲಿ ಪ್ರಾಕೃತಗಳೂ ಸಂಸ್ಕೃತದಂತೆಯೇ ಸಮಾಜದಿಂದ ದೂರಸರಿಯುತ್ತಾ ಹೋಗುತ್ತವೆ.

ಈ ಭಾಷಾ-ಪರಿವರ್ತನ ಚಕ್ರವು ಭಾಷಾ-ಸಂಕರದ ಸನ್ನಿವೇಶದಲ್ಲಿ ಹೊಸ ಆಯಾಮವನ್ನು ಪಡೆಯುತ್ತದೆ. ಭಾರತದ ಭಾಷಿಕ ಸನ್ನಿವೇಶದಲ್ಲಿ  ಬ್ರಾಹ್ಮೀ ಮೂಲವಾದ ಎಲ್ಲಾ ಭಾಷೆಗಳು ಪದ -ಕೋಶ -ವ್ಯಾಕರಣಗಳಲ್ಲಿ ಭಿನ್ನವಾದರೂ, ಮೂಲಭೂತವಾದ    ವರ್ಣ-ಮಾಲೆಯಲ್ಲಿ  ಭಿನ್ನತೆಯನ್ನು ಹೊಂದಿಲ್ಲ. ಲಿಪಿ ಸಂಕೇತ ಬೇರೆಯಾದ ಮಾತ್ರದಿಂದ ಉಚ್ಚಾರಣೆಯಲ್ಲಿ ( ಬಹುತೇಕ) ಭೇದ ಕಂಡುಬರುವುದಿಲ್ಲ.  ಹೀಗಾಗಿ ಸಂಸ್ಕೃತ / ಪ್ರಾಕೃತ ಭಾಷಾ ಸಾಹಿತ್ಯಗಳು  ಕನ್ನಡ ತೆಲುಗು ಹಿಂದೀ ಬೆಂಗಾಲಿ ಗುಜರಾತಿ ಲಿಪಿಗಳಲ್ಲಿ  ಬರೆದ ಮಾತ್ರದಿಂದ  ಅವುಗಳ ಉಚ್ಚಾರಣೆಯಾಗಲೀ , ಕೋಶ -ವ್ಯಾಕರಣ ವ್ಯವಸ್ಥೆಗಳಾಗಲೀ ವ್ಯತ್ಯಾಸವನ್ನು  ಹೊಂದಲಿಲ್ಲ.

ಆದರೆ, ಹದಿನೆಂಟನೆಯ ಶತಮಾನದಲ್ಲಿ ಒಂದು ಹೊಸ ಪರಿವರ್ತನೆ ಭಾರತದಲ್ಲಿ ಉಂಟಾಯಿತು.  ಭಾರತೀಯ ಭಾಷೆಗಳ ಸಾಹಿತ್ಯವನ್ನು, ವ್ಯವಹಾರವನ್ನು , ಆಂಗ್ಲಾಕ್ಷರಗಳಲ್ಲಿ  ಬರೆಯುವ ಪದ್ಧತಿಯನ್ನು ಮತ್ತು   ಆಂಗ್ಲ ಭಾಷಾ ಮಾಧ್ಯಮದಲ್ಲಿ   ದೇಶ-ವ್ಯವಹಾರವನ್ನು ನಿರ್ವಹಿಸುವ  ಪದ್ಧತಿಯನ್ನು  ಅಂದಿನ ಬ್ರಿಟಿಷ ಸರಕಾರವು ಭಾರತದಲ್ಲಿ ಪ್ರಚುರಗೊಳಿಸಿತು.  ಇದರಿಂದಾಗಿ ಭಾರತೀಯ ಭಾಷಾ-ಲೋಕದಲ್ಲಿ  ಐರೋಪ್ಯ ಭಾಷೆಯಾದ ಆಂಗ್ಲವರ್ಣಮಾಲೆಯ  -ಉಚ್ಚಾರಣೆ ಹಾಗೂ ಲಿಪಿ ಸಂಕೇತಗಳ ಸಂಗಮ ಅನಿವಾರ್ಯವಾಯಿತು. ಇದರ ಫಲಿತ : ಭಾರತೀಯ ವರ್ಣಾಕ್ಷರ ಮಾಲೆಗೆ ಆಂಗ್ಲಾಕ್ಷರಗಳ ಹೊಂದಾಣಿಕೆ.  ಇದು ಉಚ್ಚಾರಣೆ  ಹಾಗೂ ಬರವಣಿಗೆ ಎರಡೂ ರೂಪದಲ್ಲಿ , ಎಲ್ಲಾ ಭಾರತೀಯ ಭಾಷೆಗಳ ಸನ್ನಿವೇಶದಲ್ಲಿ ಹಿಂತಿರುಗಿಸಲಾಗದಷ್ಟು ಬದಲಾವಣೆಗಳನ್ನು ಉಂಟುಮಾಡಿತು.

ಆಂಗ್ಲಾಕ್ಷರಗಳ ಹಾಗೂ ಭಾರತೀಯ ಭಾಷೆಗಳ ವರ್ಣಮಾಲೆಯ ಸಂಯೋಜನೆಯನ್ನು ೧೮ನೇ ಶತಮಾನದಲ್ಲಿ  ಮುದ್ರಣ ಸೌಕರ್ಯಕ್ಕಾಗಿ ಮಾಡಿದ ಕೋಷ್ಟಕ ಪಟ್ಟಿ ಹೀಗಿದೆ.

ಇದರಲ್ಲಿ ಭಾರತೀಯ ಭಾಷೆಗಳನ್ನು ಆಂಗ್ಲಾಕ್ಷರಗಳ ಬಳಸುವಿಕೆಯಲ್ಲಿ ಹೇಗೆ ಬರೆಯಬೇಕು – ಮುದ್ರಿಸಬೇಕು ಎಂಬ ವಿಷಯವನ್ನು ನಿರ್ಧರಿಸಲಾಗಿದೆ. ಈ ಕೋಷ್ಠಕವನ್ನು ಬಳಸಿಕೊಂಡು ಐರೋಪ್ಯ ಪಾಶ್ಚಿಮಾತ್ಯ  ಕ್ರೈಸ್ತ ವಿದ್ವಾಂಸರು ಅನೇಕ ಭಾರತೀಯ ಭಾಷೆಗಳ ಕೋಷಗಳನ್ನು ರಚಿಸಿದ್ದಾರೆ.  ಈ ಕೋಷಗಳಲ್ಲಿ ಭಾರತೀಯ ಭಾಷಿಕ ಪದಗಳ ಜೊತೆಗೆ ಆಂಗ್ಲ ಸಮಾನಾರ್ಥಕ ಪದಗಳನ್ನೂ ಕೊಟ್ಟಿದ್ದಾರೆ.  ಮುದ್ರಿತವಾದ ಈ ಪುಸ್ತಕಗಳಲ್ಲಿ ಭಾರತೀಯ ಭಾಷೆಗಳ ವರ್ಣಾಕ್ಷರಗಳ ಲಿಪಿ-ಸಂಕೇತಗಳ ಮುದ್ರಿತ -ಲಿಖಿತ ಸ್ವರೂಪವೂ ಸಹ  ಬಹುತೇಕ ನಿರ್ಧರಿಸಲ್ಪಟ್ಟಿದೆ. ಇಂದಿಗೂ ಭಾರತೀಯ ಭಾಷೆಗಳ ಲಿಪಿ ಸ್ವರೂಪಗಳು ಇಲ್ಲಿ ನಿರ್ಧಾರಿತವಾಗಿ ಕೊಟ್ಟಿರುವುದಕ್ಕಿಂತ ಭಿನ್ನವಾಗಿರುವುದಿಲ್ಲ. ಈ ರೀತಿಯಾಗಿ ಭಾರತೀಯ , ವಿಶೇಷವಾಗಿ ದಕ್ಷಿಣ ಭಾರತೀಯ ಕನ್ನಡ, ತೆಲುಗು, ತುಳು ತಮಿಳು ಅಕ್ಷರಗಳ ಲಿಪಿ-ಸ್ವರೂಪ, ಸಂಖ್ಯೆ, ಸ್ವರೂಪ, ಜೋಡಣೆ – ಇವಲ್ಲ ವೂ ಸಹ ಒಂದು ಚಾರಿತ್ರಿಕ ಸಾಮಾಜಿಕ ಪರಿವರ್ತನೆಯನ್ನು ಹೊಂದಿದವು.  ಇದರ ಪ್ರಭಾವ ಎಲ್ಲಾ ಭಾರತೀಯ ಭಾಷೆಗಳ ಸಮಗ್ರ ಅಧ್ಯಯನ -ಶಿಕ್ಷಣ – ಸಾಮಾಜಿಕ ಬಳಕೆಗಳ ಮೇಲೆ ಆಗಿದೆ. ಆಷ್ಟೇ ಅಲ್ಲದೆ ’ ಆಂಗ್ಲ- ಪರಿವರ್ತಕ ಬಣ್ಣದ ಭೂತ-ಕನ್ನಡಿಯಿಂದ  ಭಾರತೀಯ ಸಂಸ್ಕೃತಿ -ಇತಿಹಾಸಗಳ ಅಧ್ಯಯನದ ಹೊಸ ಹಾದಿ ಇಲ್ಲಿ ಕವಲೊಡೆದುಕೊಳ್ಳುತ್ತದೆ .  ಈ ರೀತಿಯಾಗಿ ಭಾರತೀಯ ಭಾಷೆಗಳು ಆಂಗ್ಲಾಕ್ಷರ-ಲಿಪಿ-ಸಂಕೇತಗಳಲ್ಲಿ ಬರೆದು ಮುದ್ರಿಸುವ ಪದ್ಧತಿ ಪ್ರಧಾನವಾಗಿ ಕ್ರೈಸ್ತ ಮತ-ಧರ್ಮದ ಪ್ರಧಾನ  ಪುಸ್ತಕವಾದ ಬೈಬಲ್ ಅನ್ನು ದೇಶಭಾಷೆಗಳಲ್ಲಿ ಅನುವಾದಿಸಿ, ಮುದ್ರಿಸಿ ವಿತರಣೆ ಮಾಡುವುದಕ್ಕಾಗಿಯೇ ಬಳಕೆಯಾಯಿತು. ನಂತರ ಚರ್ಚ್ ಮಿಷನರಿ / ಮಾಂಟೆಸ್ಸರಿ / ಕಾನ್ವೆಂಟ್ – ಶಾಲೆಗಳಲ್ಲಿ ದೇಶಭಾಷೆಯನ್ನು ಹಾಗೂ ಇಂಗ್ಲೀಷ್ ಜೊತೆ ಜೊತೆಗೆ ಕಲಿಸುವಾಗ  ಭಾರತೀಯ ಭಾಷೆಗಳ ಸಂಕರವು  ಇಂಗ್ಲೀಷ್ ಜೊತೆಗೆ ಹೆಚ್ಚುತ್ತಾ ಹೋಯಿತು. ಈ ಎರಡು ಶತಮಾನಗಳಲ್ಲಿ , ವಿಶೇಷವಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ  ಇಂಗ್ಲೀಷ್ ಅನ್ನು ಆಡಳಿತ, ವ್ಯವಹಾರ, ಆರ್ಥಿಕ ವ್ಯವಹಾರ ಹಾಗೂ ನ್ಯಾಯಾಂಗಗಳಲ್ಲಿ ಅಳವಡಿಸಿಕೊಂಡಿರುವುದರಿಂದ ಇತರ ಎಲ್ಲಾ ಭಾರತೀಯ ಭಾಷೆಗಳಿಗಿಂತ  ಇಂಗ್ಲೀಷ್  ಪ್ರವರ್ಧಮಾನಕ್ಕೆ  ಬಂದು ಭಾರತ ನೆಲಯಲ್ಲಿ ನೆಲೆಯನ್ನು ಬಲವಾಗಿ ಕಂಡುಕೊಂಡಿದೆ. ಇತ್ತೀಚಿನ ಮೂರು ದಶಕಗಳಲ್ಲಿ ಗಣಕ ಯಂತ್ರ -ತಂತ್ರ ಜ್ಞಾನ ವೃತ್ತಿಗಳು ಇಂಗ್ಲೀಷಿನ ಬೇರಿನೊಡನೆಯೇ ಸೇರಿದ್ದು ಅಂತರ್ರ್ರಾಷ್ಟ್ರೀಯ ವ್ಯವಹಾರಕ್ಕೆ ಅವಶ್ಯಕ ಮತ್ತು  ಅನಿವಾರ್ಯವಾದ ಕಾರಣ  ಶಾಲಾ-ಶಿಕ್ಷಣದಲ್ಲಿ ಭಾರತೀಯ ಭಾಷೆಗಳಿಗಿಂತ ಇಂಗ್ಲೀಷ್ ಅಧ್ಯಯನಕ್ಕೆ ಹೆಚ್ಚು ಮಹತ್ತ್ವ ದೊರಕಿದೆ. ಕರ್ಣಾಟಕದಲ್ಲಿ ದೇಶ-ಭಾಷಾ ಮಾಧ್ಯಮ ಶಾಲೆಗಳು ಹಾಗೂ ಕನ್ನಡ ಮಾಧ್ಯಮದ ಬಗ್ಗೆ ಕಳಕಳಿ ವರ್ಷದಲ್ಲಿ ಕನ್ನಡ ರಾಜ್ಯೋತ್ಸವದ ದಿವಸಕ್ಕೆ ಸೀಮಿತವಾಗಿದ್ದು  ಇತರೆ ದಿನಗಳಲ್ಲಿ ಇಂಗ್ಲೀಷ್ ತನ್ನ ವಸಾಹತು ಶಾಹಿ ದರ್ಬಾರನ್ನು ಮುಂದುವ್ರೆಸುತ್ತಿದೆ. ಕರ್ಣಾಟಕದಲ್ಲಿ ಕಳೆದ ಇಪ್ಪತ್ತು ವರ್ಷಗಳ ಅಂತರದಲ್ಲಿ,  ಅಧಿಕಗೊಂಡಿರುವ ಆಂಗ್ಲ -ಶಿಕ್ಷಣ ನೀಡುವ  ಮಾಂಟೆಸ್ಸರಿ / ಕಾನ್ವೆಂಟ್ – ಪ್ರಾಥಮಿಕ, ಶಾಲೆಗಳ  ಸಂಖ್ಯೆ ಹಾಗೂ ಸೊರಗುತ್ತಿರುವ ಕನ್ನಡ ಮಾಧ್ಯಮ – ಕನ್ನಡ ಶಾಲೆಗಳು – ವಿದ್ಯಾರ್ಥಿಗಳ ಸಂಖ್ಯೆ ಈ ಸತ್ಯಕ್ಕೆ ಕನ್ನಡಿ ಸಾಕ್ಷಿಯಾಗಿರುತ್ತದೆ. ಕನ್ನಡ ಭಾಷೆಯ ಸೊಗಡನ್ನು ಕಳೆದುಕೊಳ್ಳುತ್ತಿರುವ ಕರ್ಣಾಟಕ ಮೇಲೆ ಹೇಳಿದ ’-ಭಾಷೆ ಕೆಟ್ಟರೆ ದೇಶ -ದೇಶ-ಸಂಸ್ಕೃತಿ -ಸಂಸ್ಕಾರ ಗಳು, ಅದಕ್ಕೆ ಸಂಬಂಧ ಪಟ್ಟ ಇತಿಹಾಸ, ಚರಿತ್ರೆ, ಆಚರಣೆ, ಅಭಿಮಾನಗಳೂ ಕೆಡುತ್ತವೆ.’ ಮಾತಿನ ನಿಜಾಯಿತಿಗೆ ಜೀವಂತ ಸಾಕ್ಷಿಯಾಗುತ್ತಿದೆ.

ಹಾಗಿದ್ದರೆ ಇದಕ್ಕೆ ಸೂಕ್ತ ಪರಿಹಾರ ಇಲ್ಲವೇ ?  ಎಂದರೆ, ಇದೆ.  ಈ ಪರಿಹಾರವು ಪ್ರಾಥಮಿಕ ಹಂತದಲ್ಲಿ ಭಾಷಾ ಶಿಕ್ಷಣ ಪದ್ಧತಿಯ ಪರಿಷ್ಕಾರದಿಂದ ಮೊದಲಾಗುತ್ತದೆ. ಈ ಪರಿಷ್ಕಾರವು ಗಣಕಯಂತ್ರ – ಸಹಾಯದಿಂದ ಶೀಘ್ರ ಹಾಗೂ ಸಾರ್ಥಕ ರೀತಿಯಲ್ಲಿ ಭಾಷಾ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದ ಶಾಲೆಗಳಲ್ಲಿ ಅಳವಡಿಸುವುದರಿಂದ ಪರಿಣಾಮಕಾರಿಯಾಗಿ ಸಾಧಿಸಲು ಸಹಾಯಕವಾಗುತ್ತದೆ. ಇದರಿಂದ ಆಧುನಿಕ ತಂತ್ರಜ್ಞಾನವನ್ನು ಹಾಗೂ ಸಮ-ಸಾಮಯಿಕ ಬಹು ಭಾಷಿಕ ವ್ಯವಸ್ಥೆ/ ತ್ರಿಭಾಷಾ ಸೂತ್ರ ಬದ್ಧತೆಯನ್ನು ದೂರಮಾಡಿಕೊಳ್ಳದೇ ಕನ್ನಡ -ಭಾಷೆಯ ಬಲ ಸಂವರ್ಧನೆಯನ್ನು ಮಾಡಲು ಸಾಧ್ಯವಿದೆ.

ನಾದ ಕೀಲಿಮಣೆ ಕನ್ನಡ -ಭಾಷೆಯನ್ನು ಶಾಲೆ ಹಾಗೂ ಮನೆಗಳಲ್ಲಿ ಗಣಕ ಯಂತ್ರದ ಸಹಾಯದಿಂದ ಕಲಿಸಲು ಹಾಗೂ ಕಲಿಯಲು ಅನುಕೂಲ ಮಾಡಿಕೊಡುವ ಒಂದು ವಿಶೇಷ  ವಿನ್ಯಾಸದ ಕೀಲಿಮಣೆ. ಇದರಲ್ಲಿ ಕೀಲಿಮಣೆಯ ಅಕ್ಷರ ವಿನ್ಯಾಸವನ್ನು ಭಾರತೀಯ ಬ್ರಾಹ್ಮೀ ಭಾಷೆಗಳ ವರ್ಣಮಾಲೆಯ ಸ್ವರೂಪ – ಸ್ವಭಾವ, ಸಂಯೋಜನೆಗಳಿಗೆ ಅನುಸಾರವಾಗಿ ರೂಪಿಸಲಾಗಿದೆ. ಇಲ್ಲಿ  ನಾವು ಪ್ರತಿಪಾದಿಸುತ್ತಿರುವ ಅಂಶ : ಕನ್ನಡದ ಅ-ಆ-ಇ-ಈ ಕಲಿಯಲು – ಕಲಿಸಲು  A-B-C-D ಯ ಊರೆಗೋಲು ಬೇಕಿಲ್ಲ. ಈ ರೀತಿಯಾಗಿ ಕನ್ನಡವನ್ನು ಕನ್ನಡವಾಗಿ ಕಲಿಸಿ ಬೆಳೆಸಲು ಶಾಲಾ ಹಂತಗಳಲ್ಲಿ ಪ್ರಾಥಮಿಕ ದೇಶ -ಭಾಷೆ, ಮಾತೃ ಭಾಷೆ, ಸಂಸ್ಕೃತಿ -ಭಾಷೆಯಾಗಿ ’ಕುರಿತೋದದೆಯುಂ ಪರಿಣತಮತಿಗಳಾಗಿ’  ಕನ್ನಡ ಪಂಪ- ರನ್ನ ಮುದ್ದಣರನ್ನು ಬೆಳಸುವ ಕಾರ್ಯದಲ್ಲಿ ನಾದ ಕೀಲಿಮಣೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದೆ.  ಇದರಿಂದ  ಮುಂದೊಂದು ಕಾಲದಲ್ಲಿ ಕನ್ನಡದಿಂದ ಇಂಗ್ಲೀಷನ್ನು ಬರೆಯಲು ಸಾಧ್ಯವಾದಾಗ , ಹದಿನೆಂಟನೆಯ ಶತಮಾನದಲ್ಲಿ ಮೂಡಿದ  ’ರೋಮನೈಸೇಷನ್’ ವಿಷದ ಅತಿರೇಕ ತಗ್ಗಬಹುದೆಂದು ನಮ್ಮ ವಿಶ್ವಾಸ.

Leave a Reply

Your email address will not be published. Required fields are marked *